ಪಾರಿವಾಳ
ಕೊಲಂಬಿಡಿ ಕುಟುಂಬಕ್ಕೆ ಸೇರಿದ ಪಕ್ಷಿ (ಪಿಜನ್). ಉಷ್ಣ ಸಮ ಮತ್ತು ಶೀತೋಷ್ಣ ವಲಯಗಳಲ್ಲಿ ವಾಸಿಸುತ್ತದೆ. ಇದರಲ್ಲಿ ಬೆಳವಗಳನ್ನೊಳಗೊಂಡಂತೆ ಸುಮಾರು ಇನ್ನೂರತೊಂಬತ್ತು ಪ್ರಭೇದಗಳಿವೆ. ಬೆಳವಗಳು ಸಾಧಾರಣವಾಗಿ ಪಾರಿವಾಳಕ್ಕಿಂತ ಸಣ್ಣ ಗಾತ್ರದವು. ಆದರೆ ಇವನ್ನು ವೈಜ್ಞಾನಿಕ ವರ್ಗೀಕರಣದಿಂದಾಗಲೀ ನಿಗದಿಯಾದ ಗಾತ್ರದಿಂದಾಗಲೀ ಪಾರಿವಾಳಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಪಾರಿವಾಳಗಳು ಶಾಂತ ಸ್ವಭಾವದ, ದುಂಡು ದೇಹದ, ಗಿಡ್ಡ ಕತ್ತಿನ, ಸಣ್ಣ ತಲೆಯ, ಚಿಕ್ಕ ಕೊಕ್ಕಿನ ಪಕ್ಷಿಗಳು.  ಕೊಕ್ಕು ಮತ್ತು ಮುಂದಲೆಯ ನಡುವೆ ಜೀನಿನಾಕಾರದ ಚರ್ಮದ ಪದರ ಉಂಟು. ಇವುಗಳ ಪುಕ್ಕಗಳನ್ನು ಸುಲಭವಾಗಿ ಕೀಳಬಹುದು. ಇವು ವೇಗವಾಗಿ ಹಾರಬಲ್ಲವು.

ಹೆಣ್ಣು ಗಂಡುಗಳು ಜೊತೆಗೂಡಿ ವಾಸಿಸುತ್ತವೆ. ಸಂಗಾತಿ ಸತ್ತುಹೋದರೆ ಮಾತ್ರ ಮತ್ತೊಂದು ಸಂಗಾತಿಯನ್ನು ಆರಿಸಿಕೊಳ್ಳುವ ವಿಚಿತ್ರ ಲಕ್ಷಣ ಇವಕ್ಕಿದೆ. ಹುಲ್ಲು ಮತ್ತು ಕಡ್ಡಿಗಳಿಂದ ನೆಲದ ಮೇಲೆ, ಮರದ ಕೊಂಬೆ ಅಥವಾ ಪೊಟರೆ, ಮನೆ ಮಾಡು ಮತ್ತು ಪ್ರಪಾತದ ಬದುಗಳಲ್ಲಿ ಗೂಡು ಕಟ್ಟಿ ಒಂದು ಅಥವಾ ಎರಡು (ಅಪೂರ್ವವಾಗಿ ಮೂರು) ಬಿಳಿಯ ಮೊಟ್ಟೆಗಳನ್ನಿಟ್ಟು ಎರಡು ಆಥವಾ ಎರಡೂವರೆ ವಾರಗಳವರೆಗೆ ಗಂಡು ಹಗಲಿನಲ್ಲೂ, ಹೆಣ್ಣು ರಾತ್ರಿಯಲ್ಲೂ ಅವುಗಳಿಗೆ ಕಾವು ಕೊಡುತ್ತವೆ. ಮೊಟ್ಟೆಗಳೊಡೆದು ಹೊರಬರುವ ಮರಿಗಳು ಕುರುಡಾಗಿದ್ದು, ಕೇವಲ ಕೆಲವೇ ಪುಕ್ಕಗಳನ್ನು ಹೊಂದಿರುತ್ತವೆ. ಅನಂತರ ಮರಿಗಳಿಗೆ 12-18 ದಿನಗಳವರೆಗೆ ತಂದೆ ತಾಯಿಗಳ ಆರೈಕೆ ಅಗತ್ಯ. ಮರಿಗಳಿಗೆ ಒಂದು ವಾರದಿಂದ ಹತ್ತು ದಿವಸಗಳವರೆಗೆ ಗಂಡು ಹೆಣ್ಣುಗಳೆರಡೂ ಎರೆ ಚೀಲದಲ್ಲಿ ಉತ್ಪನ್ನವಾದ ಹಾಲನ್ನು ನೀಡುತ್ತವೆ. ಮರಿಗಳು ತಂದೆತಾಯಿಗಳ ಬಾಯಿಯ ಮೂಲಕ ಎರಚೀಲಕ್ಕೆ ತಮ್ಮ ಕೊಕ್ಕನ್ನು ಚಾಚಿ ಮೊದಲು ಹಾಲನ್ನು ಅನಂತರ ಅಲ್ಲಿರುವ ಕಾಳುಗಳನ್ನು ತಿಂದು ಬೆಳೆಯುತ್ತವೆ. ಪ್ರಾಯಕ್ಕೆ ಬಂದ ಪಕ್ಷಿಗಳು ವರ್ಷಕ್ಕೆ ಎರಡು ಮೂರು ಬಾರಿ ಗೂಡು ಕಟ್ಟಿ ಮೊಟ್ಟೆ ಇಡುತ್ತವೆ. ಪಾರಿವಾಳಗಳು ತಮ್ಮ ಮೊದಲ ವರ್ಷದಲ್ಲೇ ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ಸಾಧಾರಣವಾಗಿ ಗಂಡು ಹಕ್ಕಿಗಳು ಹೆಣ್ಣಿಗಿಂತ ಸ್ವಲ್ಪ ದೊಡ್ಡವು. ಗಂಡಿನ ತಲೆಯ ಮೇಲೆ ಅಥವಾ ದೇಹದ ಮುಂಭಾಗದಲ್ಲಿ ಬಣ್ಣದ ಪಟ್ಟಿಗಳುಂಟು.

ನ್ಯೂಗಿನಿಯಲ್ಲಿ ಕಂಡುಬರುವ ಶಿಖೆಯ ಪಾರಿವಾಳಗಳು ಅತ್ಯಂತ ದೊಡ್ಡ ಗಾತ್ರದವು. ಇವುಗಳ ಉದ್ದ 60-90 ಸೆ.ಮೀ. ತಲೆಯ ಮೇಲೆ ನೀಲಿ ಮತ್ತು ಬೂದು ಬಣ್ಣದ ಹಲವು ಗರಿಗಳುಂಟು. 

ಉಷ್ಣವಲಯದಲ್ಲಿ ವಾಸಿಸುವ ಪಾರಿವಾಳಗಳು ಉಜ್ವಲವರ್ಣದವು. ಆದರೆ ಸುಪರಿಚಿತವಾದ ಕೊಲುಂಬ ಲೀವಿಯ ಪ್ರಭೇದಕ್ಕೆ ಸೇರಿದ ಕಾಡು ಪಾರಿವಾಳಗಳ ಬಣ್ಣ ಮಾಸಲು. ಯೂರೋಪ್ ಮತ್ತು ಏóಷ್ಯಾಗಳಲ್ಲಿ ಕಂಡುಬರುವ, ಈ ಪಾರಿವಾಳಗಳ ಸಾಕಣೆ ಕ್ರಿ.ಪೂ. 2000ದಿಂದಲೂ ನೆಡೆದು ಬಂದಿದೆಯೆನ್ನಲಾಗಿದೆ. ಸಾಕು ಪಾರಿವಾಳಗಳ ಅಂದವಾದ ಬಣ್ಣದ ತಳಿಗಳು, ಜೂಜಾಟದ ತಳಿಗಳು ಮತ್ತು ದೊಡ್ಡ ಗಾತ್ರದ ಆಹಾರದ ತಳಿಗಳು, ಇವುಗಳಿಂದ ಪಡೆದಂಥವು. ಹೀಗೆ ಪಡೆದ ತಳಿಗಳ ಸಂಖ್ಯೆ ಸುಮಾರು 200ಕ್ಕೂ ಹೆಚ್ಚು. 

ಸುದ್ದಿ ಒಯ್ಯಲು ಪಾರಿವಾಳಗಳನ್ನು ಅನಾದಿ ಕಾಲದಿಂದಲೂ ಬಳಸಲಾಗಿದೆ. ಪುರಾಣಗಳಲ್ಲಿ ಮತ್ತು ಅನೇಕ ದಂತ ಕತೆಗಳಲ್ಲಿ ಇವುಗಳ ಉಲ್ಲೇಖ ಉಂಟು. ಬಾಗ್ದಾದಿನ ಸುಲ್ತಾನ ಕ್ರಿ.ಶ. 1150ರಲ್ಲಿ ಪಾರಿವಾಳದ ಟಪಾಲನ್ನು ಸ್ಥಾಪಿಸಿದನೆನ್ನಲಾಗಿದೆ. ಯುದ್ದಗಳಲ್ಲಿ ತುರ್ತು ಸುದ್ದಿಗಳನ್ನು ಒಯ್ಯಲು ಇಪ್ಪತ್ತನೆಯ ಶತಮಾನದಲ್ಲಿಯೂ ಪಾರಿವಾಳಗಳನ್ನು ಬಳಸಲಾಗಿದೆ.
ಉತ್ತರ ಅಮೆರಿಕದ ಪ್ರಯಾಣಿಕ ಪಾರಿವಾಳ ಕೇವಲ ಒಂದು ಶತಮಾನದ ಹಿಂದೆ ಪ್ರಪಂಚದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಪಕ್ಷಿ ಪ್ರಭೇದವಾಗಿತ್ತು. ಮಾನವ ಆಹಾರಕ್ಕಾಗಿ ದುರಾಸೆಯಿಂದ ಬೇಟೆಯಾಡಿದ ಕಾರಣ ನಿರ್ನಾಮವಾಗಿದೆ. ಈ ಪ್ರಭೇದದ ಕೊನೆಯ ಪಕ್ಷಿ ಸಿನ್‍ಸಿನಾಟಿ ಪ್ರಾಣಿಸಂಗ್ರಹಾಲಯದಲ್ಲಿ 1914ರಲ್ಲಿ ಅಸು ನೀಗಿತು.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ